ಪಂಚಾಯಿತಿ -
	ಕಾರ್ಮಿಕರು ಅಥವಾ ಅವರ ಸಂಘಗಳು ಉದ್ಯೋಗ ಮತ್ತು ಕೆಲಸದ ಸ್ಥಿತಿಗಳನ್ನು ತೃಪ್ತಿಕರವಾಗಿಸಿಕೊಳ್ಳುವ ಸಲುವಾಗಿ ಆಗಾಗ್ಗೆ ತಮ್ಮ ಮಾಲೀಕರಲ್ಲಿ ಬೇಡಿಗೆ ಸಲ್ಲಿಸುವುದುಂಟು. ಅನೇಕ ವೇಳೆ ಇಂಥ ಬೇಡಿಕೆಗಳು ತಿರಸ್ಕøತವಾಗುವುವು, ಅಂಥ ಸಂದರ್ಭಗಳಲ್ಲಿ ಕಾರ್ಮಿಕರಿಗೂ ಅವರ ಮಾಲೀಕರಿಗೂ ಭಿನ್ನಾಭಿಪ್ರಾಯಗಳು ಬಂದು ಕೊನೆಗೆ ಅವು ಕೈಗಾರಿಕಾ ತಕರಾರುಗಳಲ್ಲಿ ಪರ್ಯವಸಾನಗೊಳ್ಳವುದುಂಟು. ಅವು ಕೈಗಾರಿಕಾ ವಿವಾದಗಳು, ಮುಷ್ಕರಗಳು ಮತ್ತು ಬೀಗ ಮುದ್ರೆಗಳಿಗೆ ಎಡೆಮಾಡಿಕೊಡುತ್ತವೆ. ಇವುಗಳಿಂದ ಕಾರ್ಖಾನೆಗಳಲ್ಲಿ ಕೆಲಸದ ನಿಲುಗಡೆಯಾಗಿ ಉತ್ಪಾದನೆ ಕುಂಠಿತಗೊಳ್ಳುವುದಲ್ಲದೆ ಆರ್ಥಿಕ ಮುಗ್ಗಟ್ಟಿಗೆ ಆಸ್ಪದವಾಗುತ್ತದೆ. ಇಂಥ ಪರಿಸ್ಥಿತಿಗೆ ಅವಕಾಶ ಇರದಂತೆ ಸರ್ಕಾರ ಅನೇಕ ಮುನ್ನೆಚ್ಚರಿಕೆಯ ಮಾರ್ಗಗಳನ್ನು ಕಲ್ಪಿಸಿದೆ. ಅವುಗಳ ಪೈಕಿ ಪಂಚಾಯತಿ ಬಹು ಮುಖ್ಯವಾದ ಮಾರ್ಗ.

	ಕೈಗಾರಿಕಾ ತಕರಾರು ಕಾಣಿಸಿಕೊಂಡಾಗ ಸರ್ಕಾರ ತಕರಾರನ್ನು ಪಂಚಾಯತಿಯ ಮೂಲಕ ಇತ್ಯರ್ಥಮಾಡಿಕೊಳ್ಳುವಂತೆ ಅವಕಾಶ ಕಲ್ಪಿಸಿಕೊಡುತ್ತದೆ. ಪಂಚಾಯಿತಿದಾರ ಇಬ್ಬರ ಅಹವಾಲನ್ನೂ ಚೆನ್ನಾಗಿ ಅಧ್ಯಯನ ಮಾಡಿ ಒಂದು ನಿರ್ಧಾರಕ್ಕೆ ಬಂದು ತನ್ನ ತೀರ್ಪನ್ನು ಕೊಡುತ್ತಾನೆ. ಎರಡೂ ಪಕ್ಷಗಳು ಈ ತೀರ್ಪನ್ನು ಒಪ್ಪಿ ಅನುಸರಿಸಬೇಕಾಗುತ್ತದೆ.

	ಪಂಚಾಯತಿಯಲ್ಲಿ ಎರಡು ಪ್ರಭೇದಗಳುಂಟು. ಒಂದು ಕಡ್ಡಾಯ ಪಂಚಾಯಿತಿ ; ಎರಡನೆಯದು ಸ್ವ ಇಚ್ಛೆಯ ಪಂಚಾಯಿತಿ. ಕಡ್ಡಾಯ ಪಂಚಾಯಿತಿಯಲ್ಲಿ ತಕರಾರನ್ನು ಕಡ್ಡಾಯವಾಗಿ ಸರ್ಕಾರ ಪಂಚಾಯಿತಿಯ ತೀರ್ಮಾನಕ್ಕೆ ವಹಿಸಿಕೊಡುವುದಲ್ಲದೆ ಪಂಚಾಯಿತಿಯ ತೀರ್ಮಾವನ್ನು ಎರಡೂ ಪಕ್ಷಗಳ ಮೇಲೆ ಕಡ್ಡಾಯವಾಗಿ ಹೇರಲಾಗುವುದು. ಇಂಥ ಪಂಚಾಯಿತಿ ಸಾಮಾನ್ಯವಾಗಿ ನ್ಯಾಯಾಲಯದ ರೂಪದಲ್ಲಿರುತ್ತದೆ. ಸರ್ಕಾರ ತಕರಾರನ್ನು ಕಡ್ಡಾಯವಾಗಿ ವಹಿಸಿಕೊಟ್ಟ ಅನಂತರ ಪಂಚಾಯಿತಿದಾರ ಎರಡು ಪಕ್ಷಗಳಿಗೂ ಸಮನ್ಸ್ ಜಾರಿಮಾಡಿ ಅವರ ಅಹವಾಲುಗಳನ್ನು ಅವರವರ ವಕೀಲರ ಮೂಲಕ ಕೇಳಿ ತನ್ನ ತೀರ್ಪನ್ನು ಕೊಡುತ್ತಾನೆ. ಈ ನಿರ್ಧಾರವನ್ನು ಪಕ್ಷಗಳು ಒಪ್ಪಲೇಬೇಕಾಗುತ್ತದೆ. ಆದರೆ ಸ್ವ ಇಚ್ಛೆಯ ಪಂಚಾಯಿತಿಯಲ್ಲಿ ಅಂಥ ಕಡ್ಡಾಯಕ್ಕೆ ಎಡೆಯಿಲ್ಲ. ಸರ್ಕಾರ ಪಂಚಾಯಿತಿ ತಜ್ಞರ ಪಟ್ಟಿಯನ್ನು ಕಾರ್ಮಿಕರ ಮತ್ತು ಉದ್ಯಮಿಗಳ ಅನುಮೋದನೆಯ ಮೇರೆಗೆ ತಯಾರು ಮಾಡಿಟ್ಟಿರುತ್ತದೆ. ತಕರಾರನ್ನು ಪಂಚಾಯಿತಿಗೆ ವಹಿಸಬೇಕಾದ ಸಂದರ್ಭ ಬಂದ ಪಕ್ಷದಲ್ಲಿ ಎರಡು ಕಡೆಯವರೂ ತಮಗೆ ಒಪ್ಪಿಗೆಯಾಗುವಂಥ ಪಂಚಾಯಿತಿದಾರನನ್ನು ಅಂಥ ಪಟ್ಟಿಯಿಂದ ಆರಿಸಿಕೊಂಡು ಆತನ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸಿ ತೀರ್ಪನ್ನು ಕೇಳಿಕೊಳ್ಳಬಹುದು. ಪಂಚಾಯಿತಿದಾರನ ತೀರ್ಪನ್ನು ಒಪ್ಪುವುದು ಬಿಡುವುದು ಎರಡೂ ಪಕ್ಷಗಳಿಗೆ ಸೇರಿದ್ದು. ಇಂಥ ಪಂಚಾಯಿತಿಯನ್ನು ಪೂರ್ಣ ಸ್ವ ಇಚ್ಛೆಯ ಪಂಚಾಯಿತಿ ಎಂದು ಕರೆಯಬಹುದು. ಎಂದರೆ ಇಲ್ಲಿ ತಕರಾರನ್ನು ಎರಡೂ ಪಕ್ಷಗಳ ಇಚ್ಛೆಯ ಮೇರೆಗೆ ಪಂಚಾಯಿತಿಗೆ ವಹಿಸುವುದಲ್ಲದೆ ಅದರ ನಿರ್ಧಾರವನ್ನೂ ಅವುಗಳ ಇಚ್ಛೆಯ ಮೇರೆಗೆ ಜಾರಿ ಮಾಡಲಾಗುತ್ತದೆ. ತಕರಾರನ್ನು ಎರಡೂ ಪಕ್ಷಗಳು ಸ್ವ ಇಚ್ಛೆಯ ಮೇರೆಗೆ ಪಂಚಾಯಿತಿದಾರನಿಗೆ ವಹಿಸಿಕೊಟ್ಟು ಅನಂತರ ಅವನ ನಿರ್ಧಾರವನ್ನು ಕಡ್ಡಾಯವಾಗಿ ಒಪ್ಪಿಕೊಳ್ಳುವುದೂ ಉಂಟು. ಇಂಥ ಪಂಚಾಯಿತಿಯನ್ನು ಕಡ್ಡಾಯ ಸ್ವ ಇಚ್ಛೆಯ ಪಂಚಾಯಿತಿ ಎಂದು ಕರೆಯಬಹುದು.

	ಆಸ್ಟ್ರೇಲಿಯದಲ್ಲಿ ಕಡ್ಡಾಯ ಪಂಚಾಯಿತಿ ಜಾರಿಯಲ್ಲಿದೆ. ಇಲ್ಲಿಯ ಕಾಮವೆಲ್ತ್ ಪಂಚಾಯಿತಿ ನ್ಯಾಯಾಲಯ ಕಾರ್ಮಿಕರ ಮತ್ತು ಉದ್ಯಮಿಗಳ ನಡುವಣ ತಕರಾರನ್ನು ಇತ್ಯರ್ಥಗೊಳಿಸಿ ತನ್ನ ನಿರ್ಧಾರವನ್ನು ಅವರ ಮೇಲೆ ಹೇರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸ್ವ ಇಚ್ಛೆಯ ಪಂಚಾಯಿತಿ ಪ್ರಚಲಿತವಾಗಿದೆ. ಇಲ್ಲಿಯದು ಪೂರ್ಣ ಸ್ವ ಇಚ್ಛೆಯ ಪಂಚಾಯಿತಿ. ಎರಡು ಪಕ್ಷಗಳವರೂ ತಮ್ಮಲ್ಲಿಯೇ ಇತ್ಯರ್ಥಗೊಳಿಸಿಕೊಳ್ಳಲಾರದ ಬಹುಪಾಲು ತಕರಾರುಗಳನ್ನು ಸಾಮಾನ್ಯವಾಗಿ ಸ್ವ ಇಚ್ಛೆಯ ಪಂಚಾಯತಿಯ ಮೂಲಕ ಇತ್ಯರ್ಥಗೊಳಿಸಿಕೊಳ್ಳುತ್ತಾರೆ. ಹಲವು ದೇಶಗಳಲ್ಲಿ ಮಿಶ್ರ ಪಂಚಾಯಿತಿಗಳಿವೆ. ಕಡ್ಡಾಯ ಮತ್ತು ಸ್ವ ಇಚ್ಛೆಯ ಪಂಚಾಯಿತಿಗಳೆರಡೂ ಜಾರಿಯಲ್ಲಿವೆ. ಇಂಥ ದೇಶಗಳಲ್ಲಿ ಭಾರತವೂ ಒಂದು. ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಸರ್ಕಾರ ಭಾರತ ರಕ್ಷಣಾ ನಿಯಮದ ಪ್ರಕಾರ ಎಲ್ಲ ತಕರಾರುಗಳನ್ನೂ ಕಡ್ಡಾಯ ಪಂಚಾಯಿತಿಗೆ ಒಪ್ಪಿಸಬೇಕೆಂದು ವಿಧಿಸಿತು. ಈ ವ್ಯವಸ್ಥೆ ಯುದ್ಧ ಮುಗಿದ ಅನಂತರವೂ ಮುಂದುವರಿಯಿತು. 1947ರ ಕೈಗಾರಿಕಾ ವಿವಾದ ಅಧಿನಿಯಮದ ಮೂಲಕ ಇದು ಭಾರತದ ಕೈಗಾರಿಕಾ ವಿವಾದ ಇತ್ಯರ್ಥ ವ್ಯವಸ್ಥೆಯಲ್ಲಿ ಶಾಶ್ವತವಾಗಿ ನೆಲೆಯೂರಿ ನಿಂತಂತೆ ತೋರುತ್ತದೆ. ಈ ಅಧಿನಿಯಮದ ಪ್ರಕಾರ ಕೈಗಾರಿಕಾ ನ್ಯಾಯಾಲಯ ಮತ್ತು ಕೈಗಾರಿಕಾ ನ್ಯಾಯಾಧಿಕರಣಗಳು ಉದ್ಭವಿಸಿದುವು. ಇವು ಕಡ್ಡಾಯ ಪಂಚಾಯಿತಿ ಕಾರ್ಯನಿರ್ವಹಣೆಯನ್ನು ವಹಿಸಿಕೊಂಡುವು. ಈ ವ್ಯವಸ್ಥೆ ಇಲ್ಲಿಯವರೆಗೂ ನಡೆದು ಬಂದಿದೆ. ಕೈಗಾರಿಕಾ ನ್ಯಾಯಾಲಯಗಳು ಸಣ್ಣಪುಟ್ಟ ವಿವಾದಗಳನ್ನು, ಎಂದರೆ ತಕರಾರುಗಳನ್ನು, ತೀರ್ಮಾನಿಸುತ್ತವೆ. ಕೈಗಾರಿಕಾ ನ್ಯಾಯಾಧಿಕರಣಗಳು ಕೂಲಿ, ತುಟ್ಟಿಭತ್ಯ ಮುಂತಾದ, ಉದ್ಯೊಗದ ಷರತ್ತುಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ ನಿರ್ಣಯ ನೀಡುತ್ತವೆ.

	ಕೈಗಾರಿಕಾ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳು ಕಡ್ಡಾಯ ಪಂಚಾಯಿತಿಯನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದು ಕೈಗಾರಿಕಾ ಶಾಂತಿಗೆ ಅನುಕೂಲ ಮಾಡಿಕೊಟ್ಟಿವೆ ಎಂದು ಕೆಲವು ತಜ್ಞರ ಅಭಿಪ್ರಾಯ, ಆದರೆ ಮತ್ತೆ ಕೆಲವರು ಈ ಸಂಸ್ಥೆಗಳು ಸದ್ಯಕ್ಕೆ ಕೆಲಸ ನಿಲುಗಡೆಯಾಗದಂತೆ ಮಾಡಿದ್ದರೂ ಇವನ್ನು ಮುಂದುವರಿಸಿಕೊಂಡು ಬುರುವುದು ಕ್ಷೇಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇವುಗಳ ತೀರ್ಪು ಬಹಳ ತಡವಾಗಿ ಬರುವುದೆಂದೂ ಇವು ವಿವಾದಗಳನ್ನು ಇತ್ಯರ್ಥಗೊಳಿಸಿದರು ಶಾಶ್ವತ ಕೈಗಾರಿಕಾ ಶಾಂತಿಯನ್ನು ನೀಡುವುದಿಲ್ಲವೆಂದೂ ಈ ಕಾರಣದಿಂದಾಗಿ ಕಾರ್ಮಿಕರ ಮತ್ತು ಉದ್ಯಮಿಗಳ ನಡುವೆ ನೇರ ಸಂಧಾನಗಳು ಬೆಳೆದುಬಂದಿಲ್ಲವೆಂದೂ ದೂರುಗಳುಂಟು. ಈ ಅಭಿಪ್ರಾಯವನ್ನು ಎತ್ತಿಹಿಡಿದವರಲ್ಲಿ ವಿ. ವಿ. ಗಿರಿ ಅವರೂ ಒಬ್ಬರು. ಗಿರಿಯವರು ಕಡ್ಡಾಯ ಪಂಚಾಯಿತಿಯನ್ನು ಖಂಡಿಸಿ ಅದರ ಬದಲಾಗಿ ಸ್ವಇಚ್ಛೆಯ ಪಂಚಾಯಿತಿಯನ್ನು ಅಭಿವೃದ್ಧಿಪಡಿಸಬೇಕೆಂದು ವಾದಿಸಿದ್ದಾರೆ. ಅವರ ಈ ನಿಲುವನ್ನು ಗಿರಿ ನಿಲುವು ಎಂದು ಕರೆಯಲಾಗಿದೆ. ಸ್ವಇಚ್ಛೆಯ ಪಂಚಾಯಿತಿಯನ್ನು ಕ್ರಮವಾಗಿ ಅಭಿವೃದ್ಧಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. 1956ರ ಕೈಗಾರಿಕಾ ವಿವಾದ (ತಿದ್ದುಪಡಿ) ಅಧಿನಿಯಮದಲ್ಲಿ ಇದಕ್ಕೆ ದಾರಿಮಾಡಿಕೊಟ್ಟಿರುವುದಲ್ಲದೆ ಆದಷ್ಟು ಮಟ್ಟಿಗೆ ಇದನ್ನು ಉಪಯೋಗಿಸಿಕೊಳ್ಳಬೇಕೆಂದು ಕಾರ್ಮಿಕರಿಗೂ ಉದ್ಯಮಿಗಳಿಗೂ ತಿಳಿಸಲಾಗಿದೆ. ಪ್ರತಿ ರಾಜ್ಯ ಸರ್ಕಾರವೂ ಅದರಂತೆ ಸ್ವಇಚ್ಛೆಯ ಪಂಚಾಯಿತಿಗೆ ಬೇಕಾಗುವ ತಜ್ಞರ ಪಟ್ಟಿಯನ್ನು ತಯಾರಿಸಿದೆ. ಆದರೆ ಸ್ವಇಚ್ಛೆಯ ಪಂಚಾಯಿತಿ ವ್ಯಾಪಕವಾಗಿ ಬಳಕೆಗೆ ಬರಲು ಭಾರತದಲ್ಲಿ ಹಲವು ತೊಡಕುಗಳಿವೆ. ಕಾರ್ಮಿಕ ಸಂಘಗಳನ್ನು ಬಲಪಡಿಸುವುದರಿಂದ ಇದನ್ನು ಜಾರಿಗೆ ತರಲು ಹೆಚ್ಚು ಅನುಕೂಲಕರವಾದ ಪರಿಸ್ಥಿತಿ ಏರ್ಪಡುತ್ತದೆ.								   (ಎ.ಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ